Top News

“ಆಪರೇಷನ್ ರೈಸ್” “ಬೇಡ ಬ್ರೋ” ಗೆ ಚಾಲನೆ: ಜಿಲ್ಲೆಯಲ್ಲಿ 24.03 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶ


 
ವಿಜಯಪುರ :  ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸುವ ಗುರಿಯೊಂದಿಗೆ ಕರ್ನಾಟಕ ಸರ್ಕಾರ 'ಆಪರೇಷನ್ ರೈಸ್ (RISE)' ಹಾಗೂ 'ಬೇಡ ಬ್ರೋ' ಎಂಬ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದೆ. ಮಾದಕ ವಸ್ತುಗಳ ಅಕ್ರಮ ಸಾಗಣೆ, ಮಾರಾಟ ಮತ್ತು ವ್ಯಸನ ತಡೆಗೆ 'ಶೂನ್ಯ ಸಹಿಷ್ಣುತೆ' ನೀತಿಯಡಿ ಪೊಲೀಸ್, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸಮಗ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ, 4,276.405 ಕೆಜಿ ಮಾದಕ ವಸ್ತುಗಳನ್ನು (ಅಂದಾಜು ಮೌಲ್ಯ ₹97.90 ಕೋಟಿ) ನಾಶಪಡಿಸಲಾಗಿದೆ.ಇದರಿಂದ ವಶಪಡಿಸಿಕೊಂಡ ಮಾದಕ ವಸ್ತುಗಳು ಮತ್ತೆ ಸಮಾಜಕ್ಕೆ ಹರಡದಂತೆ ತಡೆಯುವ ಉದ್ದೇಶ ಹೊಂದಲಾಗಿದೆ.

'ಆಪರೇಷನ್ ರೈಸ್' ಅಡಿಯಲ್ಲಿ ಸಾರ್ವಜನಿಕ ಜಾಗೃತಿ, ಕಟ್ಟುನಿಟ್ಟಿನ ಕಾನೂನು ಜಾರಿ, ವ್ಯಸನಮುಕ್ತ ಪುನರ್ವಸತಿ ಹಾಗೂ ಯುವಜನರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. 'ಬೇಡ ಬ್ರೋ' ಅಭಿಯಾನದ ಮೂಲಕ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ಸ್ನೇಹಿತರ ಒತ್ತಡಕ್ಕೆ ಮಣಿಯದೆ ವ್ಯಸನವನ್ನು ನಿರಾಕರಿಸುವ ಮನೋಭಾವ ಬೆಳೆಸಲಾಗುತ್ತದೆ.

ರಾಜ್ಯದಲ್ಲಿ 2025ರಲ್ಲಿ 9,064 ಪ್ರಕರಣಗಳು ದಾಖಲಾಗಿದ್ದು, ₹216.93 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2026 ಮೇ ಅಂತ್ಯದವರೆಗೆ 6,651 ಪ್ರಕರಣಗಳು ದಾಖಲಾಗಿದ್ದು, ₹184.72 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ 2025ರಲ್ಲಿ 36 ಹಾಗೂ 2026 ಜೂನ್ ಅಂತ್ಯದವರೆಗೆ 37 ಪ್ರಕರಣಗಳು ದಾಖಲಾಗಿವೆ. ಅವಧಿಯಲ್ಲಿ 118.165 ಕೆಜಿ ಗಾಂಜಾ ಮತ್ತು ₹24.03 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

"ಮಾದಕ ವಸ್ತುಗಳ ಪಿಡುಗಿನಿಂದ ಸಮಾಜವನ್ನು ಮುಕ್ತಗೊಳಿಸುವವರೆಗೂ ಸರ್ಕಾರದ ಹೋರಾಟ ನಿರಂತರವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

Post a Comment

ನವೀನ ಹಳೆಯದು